ಭಾರತೀಯ ಜಾನಪದ -
ಭಾರತದಲ್ಲಿ ಜಾನಪದ ಸಂಗ್ರಹ ಮತ್ತು ಅಧ್ಯಯನ ಕಾರ್ಯ 18ನೆಯ ಶತಮಾನದ ಕೊನೆಯಲ್ಲಿ ಪಾಶ್ಚಾತ್ಯರಿಂದ ಆರಂಭವಾಯಿತು. ಹೊರದೇಶಗಳಿಂದ ಭಾರತಕ್ಕೆ ಬಂದ ಪ್ರವಾಸಿಗರು, ಧರ್ಮ ಪ್ರಚಾರಕರು, ಆಡಳಿತಗಾರರು, ವಿದ್ವಾಂಸರು ಭಾರತದ ಜಾನಪದವನ್ನು ಪ್ರಾಕ್ತನ ಶಾಸ್ತ್ರದ ಒಂದು ಶಾಖೆಯಾಗಿ ಪರಿಗಣಿಸಿ ಅಧ್ಯಯನ ನಡೆಸಲಾರಂಭಿಸಿದರು. ಭಾರತ ಅನೇಕ ವಿಶಿಷ್ಟ ಮತ್ತು ವಿಚಿತ್ರ ಸಂಪ್ರದಾಯಗಳ ತೌರು ಎಂಬುದನ್ನು ಅರಿತಿದ್ದ ಪಾಶ್ಚತ್ಯರನೇಕರು ಭಾರತದ ಜನಪದ ಬದುಕನ್ನು ಬೆರಗುಗಣ್ಣಿನಿಂದ ನೋಡಿ ಬರೆದರು. ಇವರು ಭಾರತೀಯರ ಆಚಾರ, ನಂಬಿಕೆ, ಮಾಟ-ಮಂತ್ರ, ಮುಂತಾದವುಗಳ ಬಗ್ಗೆ ಸಂಗ್ರಹ ಕಾರ್ಯ ನಡೆಸಿದರು. ಅಲ್ಲದೆ ಧರ್ಮ ಪ್ರಚಾರಕ್ಕಾಗಿ ಬಂದ ಪಾದ್ರಿಗಳು ತಮ್ಮ ಧರ್ಮಪ್ರಚಾರಕ್ಕೆ ಪೋಷಕವಾಗುವಂತೆ ಸ್ಥಳೀಯ ಜನಪದರ ಭಾಷೆ ಮತ್ತು ಸಂಸ್ಕøತಿಗಳನ್ನು ಅಭ್ಯಾಸ ಮಾಡಿದರು. ಭಾಷೆಗಳ ನಿಘಂಟುಗಳನ್ನು ತಯಾರಿಸಿದರು. ಇವರ ಪೈಕಿ ಜೆ.ಎಚ್.ನೋಲ್ಸ್ ಎಂಬುವರು ಕಾಶ್ಮೀರದಲ್ಲಿ ನಡೆಸಿದ ಜಾನಪದ ಅಧ್ಯಯನ ಕಾರ್ಯ ಪ್ರಶಂಶನೀಯವಾದುದು. ಬ್ರಿಟಿಷ್ ಆಡಳಿತಗಾರರು ತಾವು ಪ್ರವಾಸ ಹೋದ ಕಡೆ ಊರಿನ ಪ್ರಮುಖ ವ್ಯಕ್ತಿಗಳೆನಿಸಿದ ಪಟೇಲ ಶ್ಯಾನುಭೋಗ, ಮುಂತಾದ ಮಧ್ಯವರ್ತಿಗಳಿಂದ ಅನೇಕ ಬಗೆಯ ಜಾನಪದ ಬದುಕಿನ ನಡವಳಿಕೆಗಳ ಸಾಮಗ್ರಿಗಳನ್ನು ಸಂಗ್ರಹಿಸಿದರು; ಅಥವಾ ತಮ್ಮ ಸಹಾಯಕರು ಅಂಥ ಕೆಲಸವನ್ನು ಮಾಡಲು ನೆರವಾದರು. ತಮ್ಮ ಆಡಳಿತದ ಬಗ್ಗೆ ಜನ ಏನೆಂದುಕೊಳ್ಳುತ್ತಾರೆ ಎನ್ನವಂಥ ಸಂಗತಿಗಳನ್ನು ತಿಳಿಯಲು ಇದು ನೆರವಾಗುತ್ತಿತ್ತು. ಉತ್ತರ ಕರ್ನಾಟಕದಲ್ಲಿಯ ಲಾವಣಿಗಳನ್ನು ಸಂಗ್ರಹಿಸಿದ ಫ್ಲೀಟ್ ಮತ್ತು ಕೇರಳದ ಪೆರ್ಸಿಮಾಕ್ವಿನ್ ಈ ನಿಟ್ಟಿನಲ್ಲಿ ಕೆಲಸ ಮಾಡಿದವರು, ಬ್ರಿಟಿಷ್ ಆಡಳಿತಗಾರರಾಗಿ ಬಂದವರಲ್ಲಿ ಅನೇಕರು ವಿದ್ವಾಂಸರಾಗಿದ್ದರು. ಇಂಗ್ಲೆಂಡ್, ಜರ್ಮನಿ, ಫಿನ್ಲೆಂಡ್, ಫ್ರಾನ್ಸ್ ಮುಂತಾದ ಕಡೆ ನಡೆಯುತ್ತಿದ್ದ ಪ್ರಾಕ್ತನಶಾಸ್ತ್ರ, ಭಾಷಾಶಾಸ್ತ್ರ, ಮಾನವಶಾಸ್ತ್ರ, ಜಾನಪದ ಮತ್ತು ತೌಲನಿಕ ಅಧ್ಯಯನಗಳು ಪಾಶ್ಚಾತ್ಯ ವಿದ್ವಾಂಸರಲ್ಲಿ ಭಾರತೀಯ ಸಂಸ್ಕøತಿಯ ಬಗೆಗಿನ ಆಸಕ್ತಿಯನ್ನು ಪ್ರೇರಿಸಿದವು.

	ಭಾರತೀಯ ಸಂಸ್ಕøತಿಯ ವಿವಿಧ ಮುಖಗಳನ್ನು ಪರಿಚಯ ಮಾಡಿಕೊಳ್ಳುವ ಉದ್ದೇಶದಿಂದ ಅನೇಕ ಪಾಶ್ಚಾತ್ಯ ವಿದ್ವಾಂಸರು ಭಾರತಕ್ಕೆ ಬಂದರು. ಇವರ ಪೈಕಿ ಮುಖ್ಯರಾದವರೆಂದರೆ ವೆರಿಯರ್ ಎಲ್ವಿನ್, ಎಫ್, ಎ, ಸ್ಟೀಲ್, ಎಚ್. ರೋಸ್, ಜಿ. ಎ. ಗ್ರಿಯರ್ ಸನ್, ಆರ್. ಸಿ. ಟೆಂಪಲ್, ಪಿ. ಒ. ಬೊಡ್ಡಿಂಗ್, ಚಾಲ್ರ್ಸ್, ಇ. ಗೋವರ್ ಇ. ಬಿ. ಹೊವೆಲ್, ಎಂ. ಬಿ.ಎಮೆನೊ, ಜಿ. ಎಚ್. ನೋಲ್ಸ್, ಸಿ. ಎಚ್. ಬೊಂಪಾಸ್ ಮುಂತಾದವರು. ಈ ವಿದ್ವಾಂಸರಲ್ಲಿ ಕೆಲವರು ಜಾನಪದದ ಕೆಲವು ವಿಷಯಗಳಿಗೆ ಮಾತ್ರ ತಮ್ಮ ಸಂಗ್ರಹ ಮತ್ತು ಅಧ್ಯಯನ ಸೀಮಿತಗೊಳಿಸಿಕೊಂಡರು. ಆದರೆ ಜಾನಪದ ಸಂಗ್ರಹ ಕಾರ್ಯದ ಆರಂಭ ಇದಾದುದರಿಂದ ಅನೇಕರು ತಮಗೆ ದೊರಕಿದ ಎಲ್ಲ ಸಾಮಗ್ರಿಗಳನ್ನೂ ಸಂಗ್ರಹಿಸಿರುವುದುಂಟು. ಬೇರೆ ಬೇರೆ ವಿಷಯಗಳಲ್ಲಿ ಇವರು ಆಸಕ್ತಿ ಹೊಂದಿರುವುದೇ ಇದಕ್ಕೆ ಕಾರಣ. ವೆರಿಯರ್ ಎಲ್ವಿನ್ ಮಾನವಶಾಸ್ತ್ರಜ್ಞ. ಈತ ಜನಪದ ಕಥೆ, ಪುರಾಣ, ಐತಿಹ್ಯ, ಗೀತೆ ಮುಂತಾದ ಅನೇಕ ಪ್ರಕಾರಗಳ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾನೆ. ಮಧ್ಯಭಾರತದ ಆದಿವಾಸಿಗಳ ಪುರಾಣ, ಗೀತೆ, ಆಭರಣ, ಅಲಂಕಾರವೇ ಮೊದಲಾದ ವಿಷಯಗಳಲ್ಲಿ ಈತ ನಡೆಸಿರುವ ಸಾಧನೆ ಅದ್ವಿತೀಯವಾದುದು. ಎಂ.ಬಿ. ಎಮೆನೊ ನೀಲಗಿರಿಯ ಕೋತ, ತೊದವ ಜನರ ಭಾಷಿಕ ಅಧ್ಯಯನ ಮಾಡುವಾಗ ಅವರ ಜನಪದ ಕಥೆಗಳು ಮತ್ತು ಗೀತೆಗಳನ್ನೆಲ್ಲ ಸಂಗ್ರಹಿಸಿದ್ದಾನೆ. ಚಾಲ್ರ್ಸ್, ಇ ಗೋವರ್ ದಕ್ಷಿಣ ಭಾರತೀಯ ಸಂಸ್ಥಾನಗಳ ಪ್ರಾತಿನಿಧಿಕ ಜನಪದ ಗೀತೆಗಳನ್ನು ಸಂಗ್ರಹಿಸಿ ಹೆಸರಾಗಿದ್ದಾನೆ. ಎಫ್. ಎ. ಸ್ಟೀಲ್. ಜಿ. ಎಚ್. ಎ. ರೋಸ್ ಮುಂತಾದವರು ಪಂಜಾಬ್, ಕಾಶ್ಮೀರ ಮತ್ತು ಉತ್ತರ ಭಾರತದ ಪ್ರಮುಖ ಜನಪದ ಕಥೆ, ಗೀತೆಗಳನ್ನು ಹೊರತಂದಿದ್ದಾರೆ.

	ತಮ್ಮ ಅನೇಕ ಸಂಗ್ರಹಗಳ ಜೊತೆಗೆ ಕಥೆಗಳ ಕ್ಷೇತ್ರದಲ್ಲಿ ಹೆಸರು ಮಾಡಿದವರೆಂದರೆ ಎಫ್. ಎ. ಸ್ಟೀಲ್, ಎ. ಈ ಡ್ರಕೋಟ್, ಎಮ್. ಸ್ಟೋಕ್ಸ್, ಪಿ.ಬಿ. ಬೊಡ್ಡಿಂಗ್, ಮೇರಿ ಫ್ರೀರೇ, ಎಂ. ಕ್ಯಾಂಬೆಲ್, ರಿಚರ್ಡ್ ಟೆಂಪಲ್, ಡಬ್ಲ್ಯು. ಸಿ. ಬೆನೆಟ್, ಜಿ. ಜಾಕಬ್ ರಾಲ್ಛೆ, ಇ. ಎಮ್, ಗಾರ್ಡನ್ ಮುಂತಾದವರು. ಜನಪದ ಗೀತೆಗಳ ಸಂಗ್ರಹ ಮತ್ತು ಪ್ರಕಟಣೆಯಲ್ಲಿ ಹೆಸರು ಗಳಿಸಿದವರೆಂದರೆ ಡಬ್ಲ್ಯು ಗೋಲ್ಡ್ ಸ್ಟೀವನ್, ಜಿ. ಎಫ್. ಬಫ್‍ಮನ್, ಜೊತೆಗೆ ವಿಶ್ಲೇಷಣೆ ನಡೆಸಿದವರೆಂದರೆ ಜೆ. ಎಫ್. ಎ. ಮೆಕ್‍ನೈವರ್, ಟಿ.ಡಿ. ಗಿರಯೋಲಾ, ಸ್ಟಿತ್‍ಥಾಮಸ್ ಮತ್ತು ಜೆ. ಬಾಲಿಸ್, ಕೆ. ಬಾಡ್ಕರ್, ಟಿ. ಎಚ್. ಥೋರನ್‍ಟನ್, ಡಬ್ಲ್ಯು. ಎ. ಸ್ಮಿತ್ ಮುಂದಾದವರು. ಇವರ ಅಧ್ಯಯನ ಕಾರ್ಯ ಇಪ್ಪತ್ತೆನಯ ಶತಮಾನದ ನಲವತ್ತರ ತನಕ ಮುಂದುವರಿಯಿತು.

	ಭಾರತದಲ್ಲಿ ಜಾನಪದ ಸಂಗ್ರಹ ಮತ್ತು ಅಧ್ಯಯನ ಕಾರ್ಯಗಳು ಏಕಮುಖವಾಗಿಲ್ಲ. ಇದಕ್ಕೆ ಕಾರಣ ಎರಡು: 1 ಜಾನಪದವನ್ನು ಒಟ್ಟಾಗಿ ತಿಳಿಯದ ಅನ್ಯತ್ರರು ಅದರ ಸಾಮಗ್ರಿ ಸಂಗ್ರಹಿಸುತ್ತಿರುವುದು ಮತ್ತು ಅನ್ಯಕಾರ್ಯಾರ್ಥ ಅದನ್ನು ಬಳಸಿಕೊಳ್ಳುತ್ತಿರುವುದು. 2 ಭಾರತೀಯ ಜಾನಪದ ಒಂದು ತಾತ್ತ್ವಿಕ ಸಂಗತಿಯಾಗಿ ಅಧ್ಯಯಗೊಳ್ಳದೆ ಇರುವುದರಿಂದ, ಅದರ ಒಳನೆಲೆಗಳನ್ನು ಅರ್ಥ ಮಾಡಿಕೊಳ್ಳದ ವಿದ್ವಾಂಸರು ಹೆಚ್ಚುತ್ತಿರುವುದು. ಅಂಥವರು ಜಾನಪದವನ್ನು ಸಾಮಾಜಿಕ ಅಂತಸ್ತು, ಹೆಸರು ಮತ್ತು ಅಧಿಕಾರಕ್ಕಾಗಿ ದರುಪಯೋಗಪಡಿಸಿ ಕೊಳ್ಳುತ್ತಿರುವುದು. ಇದರಿಂದಾಗಿ ಜಾನಪದ ಸಂಗ್ರಹಕಾರರೇ ಬೇರೆ ಅಧ್ಯಯನ ಮಾಡುವವರೇ ಬೇರೆ ಎನ್ನುವಂತಾಗಿದೆ. ಜಾನಪದಕ್ಕೆ ಬೇಕಾದ ಕ್ಷೇತ್ರ ಸಾಮಗ್ರಿ ಸಂಗ್ರಹವಾಗದೆ ಸಂಗೃಹೀತ ಸಾಮಗ್ರಿ ಅಧ್ಯಯನಕ್ಕೆ ಸರಿಯಾಗಿ ಬಳಕೆಯಾಗದೆ ಭಾರತದಲ್ಲಿ ಜಾನಪದ ಸೈದ್ಧಾಂತಿಕವಾಗಿ ನೆಲೆಯೂರದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಈ ಪರಿಮಿತಿ ಇದ್ದೇ ಇದೆ. ಪಾಶ್ಚಾತ್ಯ ವಿದ್ವಾಂಸರ ಭಾರತೀಯ ಜಾನಪದ ಸಾಮಗ್ರಿಗಳ ಸಂಗ್ರಹದ ಉದ್ದೇಶ ತಮ್ಮ ಜಾನಪದ ಸಾಮಗ್ರಿಗೆ ಪೂರಕ ಅಥವಾ ಪರಾಮರ್ಶನ ಸಾಮಗ್ರಿಯನ್ನು ಒದಗಿಸುವುದು. ಜಾನಪದ ಸ್ವದೇಶಿಯತೆ ಸಮಗ್ರ ಚಿಂತನೆ ಎಂಬುದನ್ನು ಮೂಲತಃ ಅರ್ಥಮಾಡಿಕೊಳ್ಳದೇ ಭಾರತೀಯ ಸಂಗ್ರಹಕಾರರು ಪಾಶ್ಚಾತ್ಯ ವಿದ್ವಾಂಸರನ್ನು ಅನುಕರಣೆ ಮಾಡಿದರು. ದುರಂತವೆಂದರೆ ಸ್ವಾತಂತ್ರ್ಯಾನಂತರದ ದಿನಗಳಲ್ಲೂ ಭಾರತೀಯ ಸಂಗ್ರಹಕಾರರು ಇದೇ ಕೆಲಸವನ್ನು ಮುಂದುವರಿಸಿದರು.

	ನಿಜವಾದ ಅರ್ಥದಲ್ಲಿ ಭಾರತೀಯ ಜಾನಪದ ಅಂತರಾಳದ ಶೋಧನೆ ಗಾಂಧೀಜಿಯವರ ಸ್ವದೇಶಿ ಚಳವಳಿಯ ಕಲ್ಪನೆಯಲ್ಲಿಯೆ ಇದೆ. ಸ್ವದೇಶ ಸ್ವತಂತ್ರ್ಯದ ಹೆಸರಿನಲ್ಲಿ ಗಾಂಧೀಜಿ ಮೂಡಿಸಿದ ದೇಶೀಯ ಪ್ರಜ್ಞೆ ಜಾನಪದ ಪ್ರಜ್ಞೆಯಲ್ಲದೆ ಬೇರೆಯಲ್ಲ. ಅವರ ಗ್ರಾಮೀಣ ಬದುಕಿನ ಚಿಂತನೆ ಅಸ್ಪøಶ್ಯರ ಉದ್ಧಾರದಂಥ ವಿಷಯಗಳಲ್ಲಿ ಭಾರತೀಯ ಜನಪದ ಬದುಕಿನ ಪುನರುಜ್ಜೀವನದ ಆಶೋತ್ತರಗಳಿವೆ ಇದು ಜಾನಪದವೆಂಬ ಹೆಸರಿನಲ್ಲಿ ನಡೆಯಲಿಲ್ಲವಾದರೂ ಜರ್ಮನಿ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಆದ ದೇಶೀಯ ವೈಭವದ ಪುನರುತ್ಥಾನದ ಚಳಿವಳಿಗಿಂತ ಬೇರೆಯಾದುದಲ್ಲ. ಆದರೆ ಭಾರತೀಯ ಜಾನಪದ ವಿದ್ವಾಂಸರು ಇದರ ಸದುಪಯೋಗವನ್ನು ಸರಿಯಾಗಿ ಪಡೆಯಲಿಲ್ಲ.

	ಭಾರತೀಯ ವಿದ್ವಾಂಸರು ತಮ್ಮ ಜಾನಪದ ಕ್ಷೇತ್ರ ಕಾರ್ಯಕ್ರಮ ಪಾಶ್ಚಾತ್ಯ ವಿದ್ವಾಂಸರ ಜೊತೆಜೊತೆಯಲ್ಲಿ ಆರಂಭಿಸಿದರಾದರೂ ತಮ್ಮ ಉದ್ದೇಶ ಮತ್ತು ಸಾಧನೆಯಲ್ಲಿ ಅವರಿಗಿಂತ ಭಿನ್ನರಾಗಲಿಲ್ಲ. ಜಾನಪದ ಒಂದು ಸಮಗ್ರ ವಿಷಯ ಎಂಬುದನ್ನು ಕಲ್ಪಿಸಿಕೊಳ್ಳಲೂ ಇದರಿಂದ ಸಾಧ್ಯವಾಗಲಿಲ್ಲ. ಭಾರತದಲ್ಲಿ ತಮ್ಮ ತಮ್ಮ ಕ್ಷೇತ್ರಕ್ಕೆ ಪರಾಮರ್ಶನ ಸಾಮಗ್ರಿಯನ್ನು ಪಡೆಯುತ್ತಿದ್ದ ಪಾಶ್ಚಾತ್ಯ ವಿದ್ವಾಂಸರಂತೆ ಇವರೂ ತಮ್ಮ ಆಸಕ್ತಿ ಅನುಗುಣವಾಗಿ ಜಾನಪದ ಸಾಮಗ್ರಿಯನ್ನು ಬಳಸಿಕೊಳ್ಳತೊಡಗಿದರು. ಭಾಷಾಶಾಸ್ತ್ರಜ್ಞರು ಗ್ರಾಮೀಣ ಭಾಷೆಯನ್ನೂ ಸಮಾಜಶಾಸ್ತ್ರಜ್ಞರು ಗ್ರಾಮೀಣ ಬದುಕನ್ನೂ ತಕ್ಕಂತೆ ಸಂಗ್ರಹಿಸಿ ಬಳಸಿಕೊಳ್ಳತೊಡಗಿದರು. ಇದರ ಜೊತೆಗೆ ಆಂಗ್ಲ ಸಾಹಿತ್ಯ ಪ್ರಭಾವದಿಂದ ಇಲ್ಲಿಯ ಕವಿಗಳು ತಮ್ಮ ಸಾಹಿತ್ಯವನ್ನು ಸೊಬಗುಗೊಳಿಸುವ ಉದ್ದೇಶದಿಂದ ಜನಪದ ಗೀತೆಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಅಭಿವ್ಯಕ್ತಿ ನೈಪುಣ್ಯವನ್ನು ಹೀರಿಕೊಂಡರು. ಕ್ರಮೇಣ ಈ ಸಾಹಿತಿಗಳ ಹಿಡಿತ ಜಾನಪದದ ಮೇಲೆ ಅಧಿಕವಾಗಿ ಜನಪದ ಸಾಹಿತ್ಯವೇ ಜಾನಪದ ಎನ್ನುವಂತಾಯಿತು. ಅದನ್ನು ಶಿಷ್ಟ ಸಾಹಿತ್ಯದ ಒಂದು ಭಾಗವಾಗಿ ಬಳಸುವುದು ಮತ್ತು ಶಿಷ್ಟ ಸಾಹಿತ್ಯದ ಧೋರಣೆಗಳ ಮೇಲೆ ವಿವರಿಸುವುದು ಸಾಮಾನ್ಯ ಸಂಗತಿಯಾಯಿತು. ಈ ಬಗೆಯ ಧೋರಣೆಯುಳ್ಳ ಭಾರತೀಯರಲ್ಲಿ ದೇವೇಂದ್ರ ಸತ್ಯಾರ್ಥಿ, ನೆಡುನೂ ಗಂಗಾಧರಂ, ಬಿ. ರಾಮರಾಜು, ಮೋಹನ್‍ಸಿಂಗ್, ಹಲಸಂಗಿ ಸೋದರರು. ಗದ್ದಗೀಮಠ, ಕೆ.ಬಿ.ದಾಸ್, ಹೀರಾದೇವಿ, ಕೆ.ಡಿ. ಉಪಾಧ್ಯಾಯ, ಬಿ.ಕೆ. ಬರೂವಾ, ಉಳ್ಳೂರು ಪರಮೇಶ ಐಯ್ಯರ್, ಎಸ್.ಕೆ.ನಾಯರ್, ಸತ್ಯೇಂದ್ರ, ಅಣ್ಣಕಾಮು, ಎಚ್.ವಿ.ಜಗನ್ನಾಥನ್ ಮುಂತಾದವರು ಹಿರಯ ತಲೆಮಾರಿನಲ್ಲಿ ಬಂದರೆ ಕಿರಿಯ ತಲೆಮಾರಿನವರಾದ ಚಮ್ಮಾರಾ ಚೂಂಡಲ್, ಚಂದೇರಾ, ಕಿಳಿಮಾನೂರ್ ವಿಶ್ವಂಭರನ್, ಕಂಬಾರ, ಕ.ರಾ.ಕೃ. ಜೀಶಂಪ, ಪಿ.ಕೆ. ರಾಜಶೇಖರ, ಆರ್.ವಿ.ಎಸ್. ಸುಂದರಂ, ರಾಗೌ. ಕೆ.ಬಿ.ದಾಸ್ ಕಾಳೇಗೌಡ ನಾಗವಾರ ಮುಂತಾದವರು ಈ ಪರಂಪರೆಯಲ್ಲಿ ಮುಂದುವರಿಯುತ್ತಿದ್ದಾರೆ.

	ಇತ್ತೀಚಿನ ದಿನಗಳಲ್ಲಿ ವಿದ್ವಂಸರು ಜಾನಪದವನ್ನು ಒಂದು ಪ್ರತ್ಯೇಕ ಅಧ್ಯಯನ ವಿಷಯವಾಗಿ ಪರಿಗಣಿಸಿದ್ದಾರೆ. ಕಲ್ಕತ್ತಾ, ಒರಿಸ್ಸಾ, ಗುಜರಾತ್, ತಮಿಳುನಾಡು, ಆಂಧ್ರ, ಕರ್ನಾಟಕದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಜಾನಪದವನ್ನು ಸಾಹಿತ್ಯಕ್ಕೆ ಪೂರಕವಾದ ಅಧ್ಯಯನ ವಿಷಯವಾಗಿ ಅಭ್ಯಸಿಸುವ ಅವಕಾಶ ಉಂಟು. ಸ್ನಾತಕೋತ್ತರ ಮಟ್ಟದಲ್ಲಿ ಜಾನಪದವನ್ನು ಒಂದು ಪ್ರತ್ಯೇಕ ಅಧ್ಯಯನ ವಿಷಯವಾಗಿ ಕಲಿಸುವ ವ್ಯವಸ್ಥೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1974ರಿಂದಲೇ ನಡೆಯುತ್ತಿದೆ. ಇಂಥ ಒಂಟಿ ಪ್ರಯತ್ನವನ್ನು ಬಿಟ್ಟರೆ, ವೈಯಕ್ತಿಕವಾಗಿ ಜಾನಪದವನ್ನು ಅಧ್ಯಯನ ವಿಷಯವಾಗಿ ಪ್ರತಿಪಾದಿಸಿ ಬೆಳೆಸುತ್ತಿರುವ ವಿದ್ವಾಂಸರೂ ಕಂಡುಬರುತ್ತಾರೆ. ಇಂಥವರಲ್ಲಿ ದುರ್ಗಾ ಭಾಗವತ್, ಶಂಕರ್‍ಸೇನ್ ಗುಪ್ತ. ವೇದಪ್ರಕಾಶ್ ಮಟ್ಟುಕ್, ಷಣ್ಮುಗಂಪಿಳ್ಳೈ, ಮಜರಲ್ ಇಸ್ಲಾಂ, ವಿ.ಐ. ಸುಬ್ರಹ್ಮಣ್ಯಂ ಮುಂತಾದವರನ್ನು ಹೆಸರಿಸಬಹುದಾಗಿದೆ.

	ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯನ್ನು ಸ್ಥಾಪಿಸಿ ಜಾನಪದ ಸಂರಕ್ಷಣೆ, ಜನಪದ ಕಲಾವಿದರಿಗೆ ಮತ್ತು ವಿದ್ವಾಂಸರಿಗೆ ಪ್ರೋತ್ಸಾಹ, ಜಾನಪದ ಮೇಳಗಳ ಸಂಘಟನೆ ಮತ್ತು ಜನಪದ ಬದುಕಿನ ಪುನರುಜ್ಜೀವನದ ಆವಶ್ಯಕತೆಯ ಬಗ್ಗೆ ತಿಳಿವಳಿಕೆ ಕೊಡುವ ಅವಕಾಶವನ್ನು ಕಲ್ಪಸಿದೆ. ಪಶ್ಚಿಮ ಬಂಗಾಳದ ಪೋಕ್‍ಲೋರ್ ಪತ್ರಿಕೆಯನ್ನು ಬಿಟ್ಟರೆ ಜಾನಪದ ಜಗತ್ತು ಎನ್ನುವ ಪತ್ರಿಕೆ ಹೊರಡುತ್ತಿರುವುದು ಕರ್ನಾಟಕದಲ್ಲಿಯೆ. ಇದಲ್ಲದೆ ಜಾನಪದದ ಅಭಿವೃದ್ಧಿಗಾಗಿ ಕೆಲವು ಖಾಸಗಿ ಸಂಸ್ಥೆಗಳು ಸಹ ಹುಟ್ಟಿಕೊಂಡು ಜಾನಪದ ಅಧ್ಯಯನವನ್ನು ಪ್ರೋತ್ಸಾಹಿಸುತ್ತಿವೆ. ಜನಪದ ಕಲೆಗಳನ್ನು ಕಲಿತು ಪ್ರದರ್ಶಿಸುವ ವ್ಯವಸ್ಥೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇದೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಜಾನಪದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಕ್ರಿಯಾತ್ಮಕವಾಗಿದ್ದು ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗುತ್ತಿದೆ. ಈ ಎಲ್ಲ ಚಟುವಟಿಕೆಗಳಿಗೆ ಮೈಸೂರು ವಿಶ್ವವಿದ್ಯಾನಿಲಯ ಹೆಚ್ಚಿನ ಪ್ರೇರಣೆ ಸಹಕಾರವನ್ನೊದಗಿಸಿದೆ.										 	
  (ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ